Wednesday, October 15, 2008

ಬಾಂಧವ್ಯ....

ಮೂರಕ್ಷರದ ಈ ಪದ ಯಾರನ್ನಾದರೂ, ಎಲ್ಲಾದರೂ ಒಂದುಗೂಡಿಸಬಲ್ಲದು. ಒಂದೊಮ್ಮೆ ಪ್ರೀತಿಯ ಮುಖೇನ ಹತ್ತಿರ ತಂದರೆ ಮಗದೊಮ್ಮೆ ಕಚ್ಚಾಡುತ್ತಲೇ ಒಂದಾಗಿಸುತ್ತದೆ. ಅಂಥದ್ದೇ ಪ್ರೀತಿ ನನ್ನದು ಮತ್ತು ನಾನು ಇಷ್ಟು ದಿನ ಹುಡುಕಾಟದಲ್ಲಿದ್ದ ನನ್ನ ಅಣ್ಣನದ್ದು....
ಹೌದು.... ಚಿಕ್ಕಂದಿನಿಂದಲೂ ನನ್ನ ಗೆಳತಿಯರು ಅವರ ಅಣ್ಣನ ಬಗ್ಗೆ ಹೇಳುವುದಾಗಲೀ, ಇಲ್ಲ ಅವರೊಡನೆ ಪ್ರೀತಿಯಿಂದಿರುವುದು ನೋಡಿದಾಗ ಅದೇಕೋ ಪಿಚ್ಚೆನಿಸುತ್ತಿತ್ತು. ಅದು ಈರ್ಷೆಯಲ್ಲ. ಬದಲಾಗಿ ನನ್ನನ್ನು ಮುದ್ದಿಸುವ, ತಪ್ಪು ಮಾಡಿದರೆ ಗದರುವ, ಪ್ರೀತಿಯಿಂದ ಕೆನ್ನೆ ಸವರುವ ಅಣ್ಣ ನನಗಿಲ್ಲವಲ್ಲ ಎಂಬ ಕೊರಗು ಅಷ್ಟೇ.... ಅದಕ್ಕಾಗೇ ಯಾವುದೇ ಹುಡುಗರನ್ನು ಕಂಡರೂ ಅವರ ಕಣ್ಣಲ್ಲೊಮ್ಮೆ ಇಣುಕುತ್ತಿದ್ದೆ. ಇವನಲ್ಲಿ ನನ್ನನ್ನು ತಂಗಿಯಂತೆ ಪ್ರೀತಿಸುವ ಮನಸಿದೆಯೇ, ಆ ಆಂತರ್ಯವಿದೆಯೇ ಅಂತ ಇಂಚಿಂಚೂ ಬಿಡದೆ ಪರೀಕ್ಷಿಸುತ್ತಿದ್ದೆ.
ಆದರೆ ಫಲಿತಾಂಶ ಮಾತ್ರ ಶೂನ್ಯ.... ಅಲ್ಲಿದ್ದ ದುರುದ್ದೇಶ ನನ್ನ ಕಣ್ಣಂಚಲ್ಲಿ ನೀರು ತರಿಸುತ್ತಿತ್ತು. ಹೀಗೇ ಬರೀ ಹಾತೊರೆಯುತ್ತಲೇ ನನ್ನ ದಿನಗಳು ಉರುಳುತ್ತಿದ್ದವು.
ಆದರೆ ಎಲ್ಲಿದ್ದನೋ ಆ ಧಾಂಡಿಗ.....
ಎದುರು ಬಂದು ನಿಂತುಬಿಟ್ಟ.....
ಲೇ ಹುಡುಗಿ ಸುಮ್ನೆ ಯಾಕೆ ಕೊರಗ್ತೀ???? ನಿನಗೆ ಅಣ್ಣ ಅಂತ ಕರೆಯೋಕೆ ನಾನಿಲ್ಲವಾ ಅಂತ ಗದರಿದ. ಮೊದಲು ಅಣ್ಣ ಇಲ್ಲ ಅನ್ನೋ ಕೊರಗನ್ನ ಮನಸ್ಸಿಂದ ತೆಗೆದುಹಾಕು ಅಂತ ಪ್ರೀತಿಯಿಂದ ತಲೆ ಸವರಿದ... ಅಷ್ಟೇ... ಎಲ್ಲಿತ್ತೋ ಕಣ್ಣಲ್ಲಿ ನೀರು, ಸಂತೋಷದಲ್ಲಿ ಮಿಂದೆದ್ದು ತಡೆಯೇ ಇಲ್ಲದೆ ಹರಿಯತೊಡಗಿತು. ಅಂತೂ ನಾನು ಹಂಬಲಿಸಿದ, ಸದಾ ಕಾಯುತ್ತಿದ್ದ ಮನದಲ್ಲಿ ರಿಸರ್ವ ಮಾಡಿಟ್ಟಿದ್ದ ಜಾಗಕ್ಕೆ ಸರಿಯಾದವನೇ ಬಂದ ಅನ್ನೋ ಖುಷಿ.

ಹೌದು, ಯಾವಾಗಲೂ ನಮ್ಮ ಬಳಿ ಏನಿಲ್ಲವೋ ಅದೇ ಹೆಚ್ಚು ಕಾಡಿಸೋದು. ಮತ್ತೆ ಮತ್ತೆ ಕಣ್ಣೆದುರೇ ನಿಂತು ಅಣಕಿಸುವುದೂ ಅದೇ.. ಆದರೆ ಇಷ್ಟು ದಿನ ನಾನು ಕೊರಗಿದ್ದಕ್ಕೆ ಒಬ್ಬ ಅಣ್ಣ... ಒಬ್ಬನೇ ಒಬ್ಬ ಅಣ್ಣ.... ಸಿಕ್ಕಿಬಿಟ್ಟನಲ್ಲ... ಅದೇ ಪರಮಾನಂದ ;೦)

Sunday, October 12, 2008

ಮೊದಲ ಹೆಜ್ಜೆ.....

ಅಬ್ಬಾ.... ಅಂತೂ ಬ್ಲಾಗ್ ಕ್ರಿಯೇಟ್ ಮಾಡಿ ನಾಲ್ಕು ತಿಂಗಳ ನಂತರ ಬರೆಯೋಕೆ ಟೈಮ್ ಸಿಕ್ಕಿದೆ. ಇಷ್ಟು ದಿನ ಒಂದೇ ಒಂದು ಲೇಖನವೂ ಇಲ್ಲದೆ ಖಾಲಿ ಕ್ಯಾನ್ ವಾಸ್ ನಂತಿದ್ದ ನನ್ನ ಬ್ಲಾಗ್ ನ ಸ್ಕ್ರೀನ್ ನಲ್ಲಿಂದು ಅಕ್ಷರಗಳು ಚಿತ್ತಾರ ಮೂಡಿಸಲಿವೆ. ಯಾಕಂದ್ರೆ ಇವತ್ತು ನನಗೆ ಬರೆಯುವ ಮನಸಾಗಿದೆ.....

ಹ್ಮ.... ಶುರು ಮಾಡ್ತೀನಿ ಕೇಳಿ ನನ್ನ ಪ್ರವರ....
ನಾನು ಕೃತಿಕ... ಓದಿದ್ದು ಪಿಯುಸಿ, ಓದುತ್ತಿರೋದು ಡಿಗ್ರಿ... ಸದ್ಯ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ.
ಊರು ಉಡುಪಿ... ಆದರೆ ಹುಟ್ಟಿದ್ದು ಬೆಳೆದದ್ದು, ಈಗ ಇರೋದು... ಎಲ್ಲಾ ಬೆಂಗಳೂರಿನಲ್ಲೇ....
ಇದು ನನ್ನ ಬಗ್ಗೆ ನಾನೇ ಮಾಡಿಕೊಳ್ಳುತ್ತಿರುವ ಸಂಕ್ಷಿಪ್ತ ಪರಿಚಯ...

ಈಗ ನಾನು ಹೇಳ್ತಿರೋದು ನಾಲ್ಕು ತಿಂಗಳ ಹಿಂದಿನ ಕಥೆ.....
ಯಾವಾಗಲೂ ಬೇರೆಯವರ ಬ್ಲಾಗ್ ಗಳನ್ನು ನೋಡಿ, ಅವರ ಲೇಖನಗಳನ್ನು ಓದಿ ಸಂತಸಪಡುತ್ತಿದ್ದ ನನಗೆ ಅದ್ಯಾಕೋ ಗೊತ್ತಿಲ್ಲ ಇದ್ದಕ್ಕಿದ್ದ ಹಾಗೆ ನನ್ನದೂ ಒಂದು ಬ್ಲಾಗ್ ಇದ್ದರೆ ಹೇಗೆ ಅನ್ನಿಸಿತು. ಜೊತೆಗೆ ನಾನೂ ಬರೀಬೇಕು ಅನ್ನಿಸ್ತು. ಅದಕ್ಕೆ ಸಹೋದ್ಯೋಗಿ ರಾಧಾಕೃಷ್ಣರ ಬಳಿ ಹೋಗಿ, ರೀ ರೀ ನಂಗೂ ಒಂದು ಬ್ಲಾಗ್ ಕ್ರಿಯೇಟ್ ಮಾಡಿಕೊಡ್ರೀ ಅಂತ ದುಂಬಾಲು ಬಿದ್ದೆ... [ಹಿಂದಿನ ದಿನವಷ್ಟೇ ಅವರ ಬ್ಲಾಗ್ ನೋಡಿದ್ದೆನಲ್ಲಾ ಅದಕ್ಕೇ ;೦)] ಸರಿ ನನ್ನ ಕಾಟಕ್ಕೆ ತಲೆ ಚಚ್ಚಿಕೊಂಡರೂ ಪಾಪ ಹೇಳಿಕೊಟ್ಟರು... ಅಷ್ಟೇ... ಎಲ್ಲಿತ್ತೋ ಆ ಉತ್ಸಾಹ... ಹಿಂದೆ ಮುಂದೆ ಯಾವ ಸೀನಿಯರ್ ಇದ್ದಾರೆ ಅನ್ನೋದನ್ನೂ ಮರೆತು ಬ್ಲಾಗ್ ಕ್ರಿಯೇಟ್ ಮಾಡೋಕೆ ಕುಳಿತುಬಿಟ್ಟೆ. ಅಲ್ಲಿಂದ ಆರಂಭವಾಯ್ತು ಚಕ್ಕುಲಿ ಚಂದಿರನ ಮೋಡಿ....
ಮೊದಲಿಗೆ ಅದಕ್ಕೊಂದು ಮುದ್ದಾದ ಹೆಸರನ್ನ ಆಯ್ಕೆ ಮಾಡಿಕೊಂಡೆ. ಚಂದದ ಲೇಯೌಟ್ ನಿಂದ ಸಿಂಗರಿಸಿದೆ..... ಎಷ್ಟೋ ದಿನಗಳು ಕಳೆದ ಮೇಲೆ ನನಗೆ ಯಾವಾಗಲೂ ಅಚ್ಚರಿ, ಕುತೂಹಲ ಮೂಡಿಸುವ ನಕ್ಷತ್ರ ಪುಂಜದ ಛಾಯಚಿತ್ರ ಸೇರಿಸಿದೆ....
ಅದೇ ನಿಹಾರಿಕೆ....
ಬ್ರಹ್ಮಾಂಡದ ರಹಸ್ಯಗಳನ್ನೆಲ್ಲಾ ಒಡಲಲ್ಲೇ ಬಚ್ಚಿಟ್ಟುಕೊಂಡ ನಿಹಾರಿಕೆ.....
ಕನಸುಗಳು ಗರಿಬಿಚ್ಚುವ ಸಮಯದಲ್ಲಿ ಕಣ್ಣಿಗೆ ಹಬ್ಬವುಂಟುಮಾಡುವ ಅದೇ ನಿಹಾರಿಕೆ.....
ಹ್ಮ.... ಅದರ ಬಗ್ಗೆ ಮತ್ತೊಮ್ಮೆ ಬರೀತಿನಿ ಬಿಡಿ... ಈಗ ಸದ್ಯಕ್ಕೆ ಇಷ್ಟು ಸಾಕು ಅಂದುಕೊಂಡಿದ್ದೀನಿ....