Monday, June 8, 2009

ಅಚ್ಚ ಹಸಿರಿನ ನಡುವೆ...

ಒಂದು ಸುಂದರ ತಾಣ.... ಮನುಷ್ಯರ ಸುಳಿವೇ ಇಲ್ಲ...! ಆಗೊಮ್ಮೆ ಈಗೊಮ್ಮ ಓಡಾಡುವವರು ಒಬ್ಬರೋ ಇಬ್ಬರೋ ಅಷ್ಟೆ. ಆಗಸದ ಕೆಳಗೆ ಹಸಿರು ಗಿಡಗಳ ನಡುವೆ ಗಾಳಿಗೆ ಮೊಯ್ಯೊಡ್ಡಿದರೆ ಮನಸ್ಸಿಗೆ ಅದೆಷ್ಟೋ ಆನಂದ, ತೃಪ್ತಿ, ಸಮಾಧಾನ...
ಹಕ್ಕಿಗಳ ಇಂಪಿನ ಗಾನ.... ಚೀಂವ್ ಗುಟ್ಟತ ಮಾಡುವ ಕಲರವ, ಕಣ್ಣಿಗೆ ಮುದ ನೀಡುವ ಹಸಿರ ಸಾಲು.... ಅನಂತ ಗಗನ....
ಹೀಗೆ ಇವೆಲ್ಲವುಗಳನ್ನು ನೋಡಿದರೆ ಪ್ರಕೃತಿ ಮಾತೆ ನಮ್ಮನ್ನು ತನ್ನ ಮಡಿಲೊಳಗೆ ಬೆಚ್ಚಗಿನ ಭಾವ ನೀಡಲು ಕಾಯುತ್ತಿರುವಳೋ ಎಂದೆನಿಸುತ್ತಿತ್ತು. ಹಸಿದ ಪುಟ್ಟ ಕಂದಮ್ಮನಿಗೆ ತಾಯಿ ಪ್ರೀತಿಯಿಂದ ಮುದ್ದುಗರೆದು ತನ್ನ ತೋಳುಗಳಲ್ಲಿ ಅಕ್ಕರೆಯಿಂದ ತಬ್ಬಿಕೊಂಡಹಾಗೆ....
ಇದೆಲ್ಲಾ ನೆನಪಾದದ್ದು ಬೆಂಗಳೂರಿನ ಯಾಂತ್ರಿಕ ಜೀವನದಿಂದ ಕೊಂಚ ದೂರ ಸರಿದು ನಮ್ಮೂರಿನ ಹಸಿರ ಸಾಗರಕ್ಕೆ ಬಂದಾಗ.... ಸಿಲಿಕಾನ್ ಸಿಟಿಯ ಗಿಜಿಬಿಜಿ ಬದುಕಿಂದ ಕೊಂಚ ಮಟ್ಟಿಗೆ ಮುಕ್ತಿ ಪಡೆದು ಸ್ವರ್ಗಕ್ಕೆ ಹೋಗುತ್ತಿರುವ ಅನುಭವವಾಗುತ್ತೆ. ಇಂಥ ವಾತಾವರಣದಲ್ಲಿರಲು ಪ್ರಕೃತಿಯ ಸೊಬಗನ್ನು ಸವಿಯಲೂ ಕೂಡ ಪುಣ್ಯ ಮಾಡಿರಬೇಕು. ಎಷ್ಟು ಜನರಿಗೆ ಸಿಕ್ಕೀತು ಇಂಥಾ ಅವಕಾಶ? ಆದರೆ ನನ್ನ ಅನುಭವ ಬಲು ಸೊಗಸು. ನೆನೆಸಿಕೊಂಡರೆ ಹಸಿದ ಭಿಕ್ಷುಕನಗೆ ರಸಗವಳ ಸಿಕ್ಕಷ್ಟು ಆನಂದವಾಗತ್ತೆ ಗೊತ್ತಾ...
ಅಮ್ಮ ಪ್ರಕೃತಿ ಮಾತೆ ನೀನೆಷ್ಟು ಸುಂದರ....
ನಿನ್ನ ಈ ಹಸಿರ ಸೆರಗನ್ನೇ ಹರಿದು ಜೀವವೇ ಇಲ್ಲದ ಮನೆಗಳಲ್ಲಿ ವಾಸಿಸಿಬೇಕೆ??? ಇವುಗಳ ಮಧ್ಯೆ ಬದುಕಬೇಕೆ? ಆಧುನೀಕರಣದಿಂದ ಆಗಿರುವ ನಷ್ಟವನ್ನು ಮನುಷ್ಯ ತುಂಬಬಲ್ಲನೇ... ಗಾಳಿಗೆ ತೂಗಿ ತಲೆಬಾಗಿ ನಲಿಯುವ ಗಿಡಮರಗಳ ಮಧ್ಯೆ ನೆಮ್ಮದಿಯಿಂದ ಶಾಂತಿಯಿಂದ ಬದುಕುವುದನ್ನು ಬಿಟ್ಟು ಪ್ರಾಣಿ ಪಕ್ಷಿಗಳ, ಗಿಡ ಮರಗಳ ಸುಳಿವೇ ಇಲ್ಲದ ನಗರದೊಳಗೆ ನಾವೂ ಜೀವವಿಲ್ಲದವರ ಹಾಗೆ ಬದುಕಬೇಕೆ? ಅಥವಾ ಪ್ರಕೃತಿಯ ಸೊಬಗನ್ನು ಸೃಷ್ಟಿಯ ಸೌಂದರ್ಯವನ್ನು ಅನುಭವಿಸಲು ಬಾರದೇ?
ಇಂಥ ನೂರಾರು, ಸಾವಿರಾರು ಪ್ರಶ್ನೆಗಳು ನನ್ನ ಬುರುಡೆಯೊಳಗೆ ಗಿರಕಿ ಹೊಡೆಯುತ್ತಲೇ ಇರುತ್ತೆ.... ಆದರೆ ಉತ್ತರ ಹುಡುಕಲು ಹೊರಟಾಗ ನಾವೂ ಯಾವುದೋ ಒಂದು ಮೂಲೆಯಲ್ಲಿ ಈ ಆಧುನಿಕ ಪ್ರಪಂಚಕ್ಕೆ ದಾಸರಾಗಿರುವ ಸತ್ಯ ಅರಿವಾಗತೊಡಗುತ್ತದೆ.... ಆದರೂ ಕಾಂಕ್ರೀಟ್ ಗೂಡಿನಲ್ಲೇ ಹುಟ್ಟಿ ಬೆಳೆದ ನನಂಥ ಎಷ್ಟೋ ಹಕ್ಕಿಗಳಿಗೆ ಒಂದೋ ಪ್ರಕೃತಿಯ ಸೌಂದರ್ಯದ ಗಂಧ ಗಾಳಿಯೂ ಗೊತ್ತಿರುವುದಿಲ್ಲ.. ಇಲ್ಲಾ ನನ್ನ ಹಾಗೆ ಆ ಸೌಂದರ್ಯದ ಅನುಭೂತಿಯಿದ್ದರೂ ಮರಳಿ ಕಾಂಕ್ರೀಟ್ ಗೂಡಿಗೇ ಮರಳಬೇಕಾದ ಅನಿವಾರ್ಯತೆ..... ಅದಕ್ಕಾಗೇ ಎಂಥಾ ಸೌಂದರ್ಯ ನೋಡಿದರೂ ಆ ಕ್ಷಣ ಆನಂದಿಸುತ್ತೇನೆಯೇ ಹೊರತು ಗೂಡು ತೊರೆಯುವ ಯೋಚನೆ ಮಾಡಿದರೆ ಹೊಟ್ಟೆಗಿಲ್ಲದೆ ಒದ್ದಾಡಬೇಕಾದೀತು ಎಂಬ ಭಯವೂ ಕಾಡತೊಡಗಿ ಸುಮ್ಮನಾಗುತ್ತೇನೆ....